ವೈಕಿಂಗರು
	9-10ನೆಯ ಶತಮಾನಗಳಲ್ಲಿ ಯುರೋಪಿನ ಉತ್ತರ ಪ್ರದೇಶಗಳಲ್ಲಿದ್ದ  ಕಡಲುಗಳ್ಳರು. ವೈಕಿಂಗ್ ಎಂಬ ಪದಕ್ಕೆ ಮೊದಲು ಯೋಧ ಅಥವಾ ಸೈನಿಕ ಎಂಬರ್ಥವಿದ್ದು, ಮುಂದೆ ಕಡಲುಯೋಧ ಎಂಬ ವಿಶೇಷಾರ್ಥ ಬಳಕೆಗೆ ಬಂತು. ವೈಕಿಂಗ್ ಕಾಲವೆಂಬುದು 9-10ನೆಯ ಶತಮಾನಗಳಲ್ಲಿ ಸತತವಾಗಿ ಸ್ಕಾಂಡಿನೇವಿಯನ್ನರು ನಡೆಸಿದ ದಾಳಿಯನ್ನು ಸೂಚಿಸುತ್ತದೆ. ವೈಕಿಂಗರು ಆರಂಭದಲ್ಲಿ ಅಕ್ರಮವಾಗಿ ದಾಳಿ ನಡೆಸುತ್ತಿದ್ದರು. ಸಮುದ್ರದಲ್ಲಿ ಸಂಚಾರ ಹೊರಟು ದಾರಿಯಲ್ಲಿ ಕಂಡ ದ್ವೀಪದಲ್ಲಿಳಿದು, ಭೂಭಾಗಕ್ಕೆ ನುಗ್ಗಿ, ಲೂಟಿ ಮಾಡಿ, ಅಲ್ಲಿಯ ಜನರೊಡನೆ ಕಲೆತು ಆ ಪ್ರದೇಶದಲ್ಲಿ ನೆಲಸುತ್ತಿದ್ದರು. ಈ ರೀತಿ ಮೊದಲು ಐರ್ಲೆಂಡ್ ಅನಂತರ ಸ್ಕಾಟ್ಲೆಂಡ್ ಪ್ರದೇಶಗಳಿಗೂ ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಆಫ್ರಿಕ ಮೊದಲಾದ ಭಾಗಗಳಿಗೂ ನುಗ್ಗಿ ಕ್ರೈಸ್ತ ಮಂದಿರಗಳನ್ನು ಲೂಟಿಮಾಡಿ ಅಲ್ಲಲ್ಲಿ ನೆಲಸಿದರು. 8ನೆಯ ಶತಮಾನದ ಅಂತ್ಯದಲ್ಲಿ ಇವರು ಇಂಗ್ಲಿಷ್ ಕರಾವಳಿ ಪ್ರಾಂತ್ಯಕ್ಕೆ ನುಗ್ಗಿದರು. 838 ರಿಂದ ಇವರ ದಾಳಿ ಬಲವಾಯಿತು. 865ರಲ್ಲಿ ಈ ದಾಳಿಕೋರರ ದೊಡ್ಡ ಸೇನೆಯೊಂದು ಇಂಗ್ಲೆಂಡಿಗೆ ನುಗ್ಗಿ ಅನೇಕ ಪ್ರದೇಶಗಳನ್ನು ಆಕ್ರಮಿಸಿತು. ಆಲ್‍ಫ್ರೆಡ್ ದೊರೆ ಈ ಪಡೆಯ ಒಂದು ಭಾಗವನ್ನು ಸೋಲಿಸಿದ. ಕನ್ಯೂಟ್ ದೊರೆ ವೈಕಿಂಗ್‍ರ ಅದ್ಭುತ ಶಕ್ತಿಯನ್ನು ನಾರ್ಡಿಕ್ ಜನರ ಚಕ್ರಾಧಿಪತ್ಯ ಕಟ್ಟಲು ಉಪಯೋಗಿಸುವಂತೆ ಪ್ರೇರಿಸಿದ್ದರಿಂದ 10ನೆಯ ಶತಮಾನದ ವೇಳೆಗೆ ಇವರ ದಾಳಿಯ ಪ್ರಾಬಲ್ಯ ಕುಗ್ಗಿತು. 

	ವೈಕಿಂಗ್‍ರ ಕೇವಲ ಕಡಲುಗಳ್ಳರಲ್ಲ; ಧೈರ್ಯಶಾಲಿಗಳು ಮತ್ತು ಬುದ್ಧಿವಂತರು. ಯುದ್ಧ, ಸಮುದ್ರ ಸಂಚಾರ ಮತ್ತು ವ್ಯಾಪಾರ ಇವುಗಳಲ್ಲಿ ಕ್ರಿಶ್ಚಿಯನ್ ಪಂಗಡದವರನ್ನು ಮೀರಿಸಿದ್ದರು. ಅವರು ಉಪಯೋಗಿಸುತ್ತಿದ್ದ ಹಡಗುಗಳು ವಿಶಿಷ್ಟ ರೀತಿಯವೆಂದು ಈಗಲೂ ಪ್ರಸಿದ್ಧಿ.									
		(ಎಚ್.ಆರ್.ಆರ್.ಐ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ